ಮೆಂಡಲ್, ಲೇಫೇಯೆಟ್ ಬೆನೆಡಿಕ್ಟ್
	1872-1935. ಅಮೆರಿಕದ ಶರೀರ ಕ್ರಿಯಾರಸಾಯನವಿಜ್ಞಾನಿ (ಫಿಸಿಯೊಲಾಜಿಕಲ್ ಕೆಮಿಸ್ಟ್). ಜೈವಿಕ ಪೋಷಣೆಯಲ್ಲಿ ಪ್ರೋಟೀನುಗಳು ಮತ್ತು ವಿಟಮಿನ್ನುಗಳ ಪ್ರಾಮುಖ್ಯವನ್ನು ಕುರಿತು ವಿಶೇಷ ಪ್ರಾಯೋಗಿಕ ವ್ಯಾಸಂಗ ನಡೆಸಿದವ. ಜನಿಸಿದ್ದು (5 ಫೆಬ್ರುವರಿ 1872) ಅಮೆರಿಕದ ನ್ಯೂ ಯಾರ್ಕ್ ರಾಜ್ಯದ ಡೆಲ್ಲಿ ಎಂಬಲ್ಲಿ.

	ಇವನ ತಂದೆ ಬೆನೆಡಿಕ್ಟ್ ಮೆಂಡಲ್ ವರ್ತಕ. ತಾಯಿ ಪಾಲೀನ್ ಉಲ್‍ಮನ್. ಇಬ್ಬರೂ ಮೂಲತಃ ಜರ್ಮನರಾಗಿದ್ದು ಅಮೆರಿಕಕ್ಕೆ ವಲಸೆ ಬಂದು ನ್ಯೂಯಾರ್ಕಿನ ಡೆಲ್ಲಿ ಎಂಬಲ್ಲಿ ನೆಲೆಸಿದ್ದರು. ಮೆಂಡಲನ ವಿದ್ಯಾಭ್ಯಾಸ ಮಾಧ್ಯಮಿಕ ಹಂತದವರೆಗೆ ಇಲ್ಲಿ ಜರುಗಿತು. ನ್ಯೂ ಯಾರ್ಕ್ ರಾಜ್ಯದಿಂದ ಯೇಲ್ ವಿಶ್ವ ವಿದ್ಯಾಲಯಕ್ಕೆ ಆಯ್ಕೆ ಮಾಡಲು ನಡೆದ ಸ್ಪರ್ಧಾಪರೀಕ್ಷೆಯಲ್ಲಿ ಉತ್ತೀರ್ಣನಾಗಿ ವಿದ್ಯಾರ್ಥಿವೇತನ ಪಡೆದು ಮೆಂಡಲ್ 1891ರಲ್ಲಿ ಯೇಲ್ ವಿಶ್ವವಿದ್ಯಾಲಯದ ಪದವೀಧರನಾದ. ಆ ಕೂಡಲೆ ಅಮೆರಿಕದ ಷೆಫೀಲ್ಡ್ ವಿಜ್ಞಾನ ಶಾಲೆಯಲ್ಲಿ ರಸ್ಸೆಲ್ ಎಚ್.ಚಿಟ್ಟೆನ್‍ಡೆನ್ ಎಂಬ ವಿಜ್ಞಾನಿಯ ನೇತೃತ್ವದಲ್ಲಿ ಶರೀರಕ್ರಿಯಾರಸಾಯನ ವಿಜ್ಞಾನದಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿವೇತನ ದೊರಕಿದ್ದರಿಂದ ಅಲ್ಲಿಗೆ ತೆರಳಿದ. ಪೂರ್ವಭಾವಿ ವೈಜ್ಞಾನಿಕ ಶಿಕ್ಷಣವಾಗಲಿ ಪ್ರಾಯೋಗಿಕ ವ್ಯಾಸಂಗದ ಅನುಭವವಾಗಲಿ ಇವನಿಗೆ ಇರದಿದ್ದರೂ ಕಷ್ಟಪಟ್ಟು ಅಲ್ಲಿ ಪ್ರಾಯೋಗಿಕ ವ್ಯಾಸಂಗ ನಡೆಸಿ ಕೇವಲ 3 ವರ್ಷಗಳಲ್ಲಿ ಪಿಎಚ್.ಡಿ. ಪದವಿ ಪಡೆದ. ಸೆಣಬಿನ ಬೀಜದಿಂದ (ಹಂಪ್‍ಸೀಡ್) ಇಡೆಸ್ಟಿನ್ ಎಂಬ ಪ್ರೋಟೀನನ್ನು ಶುದ್ಧರೂಪದ ಹರಳುಗಳಾಗಿ ಪ್ರತ್ಯೇಕಿಸಿ, ಅದರ ರಾಸಾಯನಿಕ ವಿಶ್ಲೇಷಣೆ ಮಾಡಿದುದು ಇವನ ವ್ಯಾಸಂಗದ ವಿಷಯವಾಗಿತ್ತು.

	ಮೆಂಡಲ್ ಷೆಫೀಲ್ಡ್ ಶಾಲೆಗೆ ವಿಜ್ಞಾನಿಯಾಗಿ ಸೇರಿ ಒಂದು ವರ್ಷ ಅವಧಿಯ ಉನ್ನತವ್ಯಾಸಂಗಕ್ಕಾಗಿ ಜರ್ಮನಿಗೆ ತೆರಳಿದ (1893). ಬ್ರೆಸ್‍ಲೋವ್‍ನಲ್ಲಿ ಹೀಡನ್‍ಹೆಯ್ನ್ ಎಂಬವನೊಂದಿಗೆ ಪ್ರಾಯೋಗಿಕ ಶರೀರಕ್ರಿಯಾವಿಜ್ಞಾನದಲ್ಲೂ ಫ್ರೀಬರ್ಗಿಮ್‍ನಲ್ಲಿ ಬೌಮನ್ ಎಂಬವನೊಂದಿಗೆ ಕ್ರಿಯಾಟಿನಿನ್, ಪ್ಯೂರಿನ್, ಪಿರಮಿಡಿನ್ ಮುಂತಾದ ಜೈವಿಕ ರಾಸಾಯನಿಕ ಉಪಾಪಚಯ ವಿಷಯದಲ್ಲೂ ಪರಿಣತಿ ಪಡೆದು ಷೆಫೀಲ್ಡ್‍ಗೆ ಹಿಂದಿರುಗಿದ. ಅದೇ ಶಾಲೆಯಲ್ಲಿ 1897ರಲ್ಲಿ ಸಹಾಯಕ ಪ್ರಾಧ್ಯಾಪಕನಾಗಿಯೂ 1903ರಲ್ಲಿ ಸ್ಟರ್ಲಿಂಗ್ ಪ್ರಾಧ್ಯಾಪಕನಾಗಿಯೂ ಬಡ್ತಿ ಪಡೆದ. ಮುಂದೆ 1921ರಲ್ಲಿ ಯೇಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡ. ಅಲ್ಲಿ ಈತ ಮೇಧಾವಿ. ಪ್ರಚೋದಕ ಹಾಗೂ ಪ್ರಭಾವ ಪೂರ್ವಕ ಆಚಾರ್ಯ ಎನಿಸಿಕೊಂಡ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಇಂಗ್ಲಿಷ್ ಭಾಷಾಶೈಲಿಯನ್ನು ಕಾಯ್ದುಕೊಂಡಿರಬೇಕೆಂದೂ ತಮ್ಮ ಪ್ರಯೋಗ ಫಲಿತಾಂಶವನ್ನು ಪ್ರಕಟಿಸುವಾಗ ನಿಖರವಾಗಿ ನಿರೂಪಿಸಬೇಕೆಂದೂ ಒತ್ತಿ ಒತ್ತಿ ಹೇಳುತ್ತಿದ್ದುದುಂಟು. ಶಿಷ್ಯರಿಗೆ ಸಲಹೆ ಸಹಾಯಗಳನ್ನು ನೀಡಲು ಸದಾ ಸಿದ್ಧನಾಗಿದ್ದನಲ್ಲದೆ ಅನಂತರವೂ ಅವರ ಜೀವನ ಮೇಲ್ಮೆಯಲ್ಲಿ ಆಸಕ್ತನಾಗಿದ್ದ ಕೂಡ. ಹೀಗಾಗಿ ಎಲ್ಲರ ವಿಶ್ವಾಸಕ್ಕೆ ಈತ ಪಾತ್ರನಾಗಿದ್ದ.

	1905ರ ಅನಂತರ ತಾಮಸ್ ಆಸ್‍ಬೋರ್ನ್ ಎಂಬ ಮತ್ತೊಬ್ಬ ಮೇಧಾವಿ ವಿಜ್ಞಾನಿಯೊಡನೆ ಆಹಾರದ ಪೌಷ್ಟಿಕಾಂಶಗಳ ವಿಷಯವಾಗಿ ಮೆಂಡಲ್ ವ್ಯಾಸಂಗ ಕೈಗೊಂಡ. ಬಿಳಿಇಲಿಗಳನ್ನು ಪ್ರಯೋಗಕ್ಕೆ ಈಡುಮಾಡಿ ಅದಕ್ಕೆ ಶುದ್ಧ ರೂಪದ ಪ್ರೋಟೀನು, ಪಿಷ್ಟ ಹಾಗೂ ಕೊಬ್ಬಿನ ಮಿಶ್ರಣವನ್ನು ಆಹಾರವಾಗಿ ಕೊಟ್ಟಾಗ ಅವು ಬೆಳೆಯಲಾರವೆಂದೂ ಬದುಕಿರಲಾರವೆಂದೂ ಆದರೆ ಮಿಶ್ರಣಕ್ಕೆ ಸ್ವಲ್ಪ ಹಾಲನ್ನು ಸೇರಿಸಿದರೆ ಅವು ಸಾಯಲಾರವೆಂದೂ ಈ ವ್ಯಾಸಂಗದಿಂದ ತಿಳಿದುಬಂತು. ಇಂಥದೇ ವ್ಯಾಸಂಗ ಅಮೆರಿಕದಲ್ಲಿ ಬೇರೆಡೆ ಮೆಕ್‍ಕಾಲಮ್ ಮುಂತಾದವರಿಂದಲೂ ಯುರೋಪಿನಲ್ಲಿ ಕೋಪನ್‍ಹೇಗನ್. ಬೇಸಲ್ ಮುಂತಾದ ಸ್ಥಳಗಳ ವಿಜ್ಞಾನಿಗಳಿಂದಲೂ ಜರುಗಿತ್ತು. ಪ್ರಯೋಗಕ್ಕೆ ಈಡಾಗಿರುವ ಇಲಿಗಳ ಬೆಳೆವಣಿಗೆ ಮುಂದುವರಿದು ಅವು ಜೀವದಿಂದ ಇರಬೇಕಾದರೆ ಅವಕ್ಕೆ ನೀಡುವ ಆಹಾರದಲ್ಲಿ ಪ್ರೋಟೀನು, ಪಿಷ್ಟ ಮತ್ತು ಕೊಬ್ಬಿನ ಅಂಶಗಳಲ್ಲದೆ ಕಿಂಚಿತ್ತಾಗಿ ಇನ್ನು ಏನೋ ಅವ್ಯಕ್ತ ಅಂಶಗಳು ಇರಬೇಕೆಂಬುದು ಪತ್ತೆ ಆಯಿತು. ಹಾಲಿನ ಕೊಬ್ಬಿನಲ್ಲಿ ಲೀನವಾಗಿ. ಅಲ್ಪಪ್ರಮಾಣದಲ್ಲಿರುವ ಇಂಥ ಅಂಶ ಒಂದನ್ನು ಆಸ್‍ಬೋರ್ನ್ ಮೆಂಡಲ್ಲರು ಪ್ರತ್ಯೇಕಿಸಿದರು. ಆದರೆ ಹಲವು ವಾರಗಳ ಮುಂಚೆಯೇ ಮೆಕ್‍ಕಾಲಮ್ ಈ ವಸ್ತುವನ್ನು ಪ್ರತ್ಯೇಕಿಸಿದ್ದ ಹಾಗೂ ಅದನ್ನು ಪ್ರಕಟಿಸಿಯೂ ಇದ್ದ. ಆದ್ದರಿಂದ ಪ್ರಥಮ ಆವಿಷ್ಕರಣದ ಹಕ್ಕು ಮೆಕ್‍ಕಾಲಮ್‍ಗೇ ಸಂದಿತು. ಇದಕ್ಕೆ ಈಗಿರುವ ಹೊಸ ಹೆಸರು ವಿಟಮಿನ್ ಂ.

	ಮೆಂಡಲ್ ಪ್ರೋಟೀನುಗಳ ಪೌಷ್ಟಿಕತೆಯ ವಿಚಾರವಾಗಿಯೂ ಸಂಶೋಧನೆ ನಡೆಸಿ ಲೈಸಿನ್ ಮತ್ತು ಟ್ರಿಪ್ಟೊಫೇನ್ ಎಂಬ. ಅಮೈನೋ ಆಮ್ಲಗಳು ಲೋಪವಾಗಿರುವ ಪ್ರೋಟೀನುಗಳು ಉತ್ತಮ ಪೌಷ್ಟಿಕಗಳಲ್ಲವೆಂದೂ ಬೆಳೆವಣಿಗೆಗೆ ಈ ಆಮ್ಲಗಳು ಮತ್ತು ಇನ್ನಿತರ ಕೆಲವು ಅಮೈನೋ ಆಮ್ಲಗಳು ಇದ್ದೇ ತೀರಬೇಕೆಂದೂ ಇಂಥ ಅತ್ಯಗತ್ಯ ಅಮೈನೋ ಆಮ್ಲಗಳಿರುವ (ಎಸ್ಸೆನ್ಷಿಯಲ್ ಅಮೈನೋ ಆಸಿಡ್ಸ್) ಪ್ರೋಟೀನುಗಳು ಮಾತ್ರವೇ ಉತ್ತಮ ಪೌಷ್ಟಿಕಗಳೆಂದೂ ವಿಶದಪಡಿಸಿದ.

	ಮೆಂಡಲನ ಸಂಶೋಧನೆಗಳಿಂದ ಅಲ್ಲಿಯತನಕವೂ ಬೆಳೆವಣಿಗೆಯ ಹಾಗೂ ಅದಕ್ಕೆ ಅಗತ್ಯ ಆಧಾರವಾಗಿರುವ ಆಹಾರಾಂಶಗಳ ವಿಚಾರವಾಗಿ ಕವಿದಿದ್ದ ಅನಿರ್ದಿಷ್ಟತೆ ಕಳೆದು ಪೌಷ್ಟಿಕ ವಿಚಾರಗಳು ಸುಭದ್ರ ವೈಜ್ಞಾನಿಕ ತಳಹದಿಯ ಮೇಲೆ ಊರ್ಜಿತವಾದವು. ಮೆಂಡಲ್ 1935 ಡಿಸೆಂಬರ್ 9ರಂದು ನಿಧನನಾದ. ಅಲ್ಲಿಯ ತನಕವೂ ಈತ ಯೇಲ್ ವಿಶ್ವವಿದ್ಯಾಲಯದಲ್ಲಿ ಈ ವಿಚಾರಗಳಲ್ಲಿ ಹೆಚ್ಚಿನ ಸಂಶೋಧನೆ ಹಾಗೂ ಪಾಠಪ್ರವಚನಗಳಲ್ಲಿ ನಿರತನಾಗಿದ್ದ.                
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ